ಬ್ಯಾನರ್ಜಿ, ಉಪೇಂದ್ರನಾಥ
	1879-1950. ಪತ್ರಿಕೋದ್ಯಮಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಶಿಕ್ಷಕ. ಹೂಗ್ಲೀ ಜಿಲ್ಲೆಯ ಚಂದ್ರನಗರಕ್ಕೆ ಸೇರಿದ ಗೊಂಡಲಪಾರದಲ್ಲಿ 1879 ಜೂನ್ 6ರಂದು ಜನಿಸಿದರು. ರಾಮನಾಥ ಬ್ಯಾನರ್ಜಿ ಇವರ ತಂದೆ. ಗೋಪೇಂದ್ರನಾಥ, ನರೇಂದ್ರನಾಥ, ಮತ್ತು ನಾಗೇಂದ್ರನಾಥ ಇವರ ಸಹೋದರರು. ಉಪೇಂದ್ರನಾಥರು ಡ್ಯೂಪೆಕ್ಸ್ ಕಾಲೇಜಿನಲ್ಲಿ ಎಫ್.ಎ. ಪಾಸುಮಾಡಿ ಕಲ್ಕತ್ತೆಯ ವೈದ್ಯಕೀಯ ಕಾಲೇಜನ್ನು ಸೇರಿ ಅನಾರೋಗ್ಯ ನಿಮಿತ್ತ ಅದನ್ನು ಬಿಟ್ಟು ಅನಂತರ ಪದವಿ ಶಿಕ್ಷಣಕ್ಕೆ ಡಫ್ ಕಾಲೇಜನ್ನು ಸೇರಿ ಅದನ್ನೂ ಅರ್ಧಕ್ಕೆ ಬಿಟ್ಟುಕೊಟ್ಟು ರಾಮಕೃಷ್ಣ ಪಂಥ ಸೇರಿ ದೇಶ ಪ್ರವಾಸ ಕೈಗೊಂಡರು. ಇವರಿಗೆ ಅಮರೇಂದ್ರನಾಥ ಚಟರ್ಜಿ, ಹೃಷೀಕೇಶ ಕಾಂಜೀಲಾಲ್ ಮತ್ತು ಸಿ.ಆರ್. ದಾಸ್ ಇವರ ಬಗ್ಗೆ ಪೂಜ್ಯ ಭಾವನೆಯಿತ್ತು. ಬರೀಂದ್ರ ಕುಮಾರ ಘೋಷ್, ಅರಬಿಂದ ಘೋಷ್, ಉಲ್ಲಾಸಕರ ದತ್ತ ಮೊದಲಾದ ದೇಶಪ್ರೇಮಿ ವ್ಯಕ್ತಿಗಳೊಡನೆ ನಿಕಟ ಸಂಬಂಧವಿಟ್ಟುಕೊಂಡಿದ್ದರು.

	ದೇಶಪ್ರವಾಸದ ಅನಂತರ ಉಪೇಂದ್ರನಾಥರು ಭದ್ರೇಶ್ವರ ವಿದ್ಯಾಲಯ ಅನಂತರ ಚಂದ್ರನಗರ ಪ್ರೌಢಶಾಲೆಯಲ್ಲಿ (1903-04) ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1904ರಲ್ಲಿ ಕಲ್ಕತ್ತೆಯ ಅಖಿಲಚಂದ್ರ ಮುಖರ್ಜಿಯವರ ಪುತ್ರಿ ನಲಿನಿ ಬಾಲಾದೇವಿಯೊಂದಿಗೆ ಅವರ ವಿವಾಹವಾಯಿತು. ಉಪೇಂದ್ರನಾಥರು ಪತ್ರಿಕೋದ್ಯಮವನ್ನು ಕೈಗೊಂಡು ಯುಗಾಂತರದ ಸಂಪಾದಕ ಮಂಡಳಿ ಸೇರಿದರು. ಸಂಧ್ಯ ಕರ್ಮಯೋಗಿ ಮತ್ತು ವಂದೇ ಮಾತರಮ್ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡುವು. ಇದೇ ಸಮಯದಲ್ಲಿ ಇವರಿಗೆ ಗುಪ್ತ ಕ್ರಾಂತಿಕಾರೀ ಕೂಟದೊಂದಿಗೆ ನಿಕಟ ಮತ್ತು ಸಕ್ರಿಯ ಸಂಬಂಧ ಬೆಳೆಯಿತು. 1908ರಲ್ಲಿ ಮುರಾರಿಪುಕುರ ಬಾಂಬ್ ಪ್ರಕರಣದಲ್ಲಿ ಅಜೀವ ಶಿಕ್ಷೆ ವಿಧಿಸಲ್ಪಟ್ಟು ಇವರನ್ನು 1909 ಡಿಸೆಂಬರ್ 12ರಂದು ಅಂಡಮಾನಿಗೆ ಕಳಿಸಲಾಯಿತು. ಮಾಂಟಗ್ಯೂ-ಚೆಮ್ಸ್‍ಫೋರ್ಡ್ ಸುಧಾರಣೆಗಳ ಮೇಲೆ ಸಾರ್ವತ್ರಿಕ ಕ್ಷಮಾದಾನ ಘೋಷಣೆಯಾದಾಗ 11 ವರ್ಷ ಕಾರಾಗೃಹದಲ್ಲಿ ಕಳೆದಿದ್ದ ಉಪೇಂದ್ರನಾಥರಿಗೆ ಬಿಡುಗಡೆಯಾಯಿತು. ದೇಶಕ್ಕೆ ಹಿಂತಿರುಗಿ ಬಿಜೋಲ್ ಮತ್ತು ನಾರಾಯಣ ಪತ್ರಿಕೆಗಳ ಸಂಪಾದಕ ಮಂಡಲಿ ಸೇರಿದರು. 1922ರಲ್ಲಿ ಆತ್ಮಶಕ್ತಿ ಪತ್ರಿಕೆಯ ಸಂಪಾದಕರಾದರು. ರಾಜಕೀಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಬದಲಾವಣೆ ಪರ ಗುಂಪಿಗೆ ಬೆಂಬಲವಿತ್ತರು. 1923ರಲ್ಲಿ ಇವರನ್ನು ಮತ್ತೆ ಬಂಧಿಸಲಾಯಿತು. ಜೈಲಿನಿಂದ ಮರಳಿದ ಬಳಿಕ ಸಿ.ಆರ್. ದಾಸರ ಸ್ವರಾಜ್ಯ ಪಕ್ಷವನ್ನು ಸೇರಿಕೊಂಡು ಪಕ್ಷದ ಪತ್ರಿಕೆ ಸ್ವದೇಶದ ಸಂಪಾದಕತ್ವದಲ್ಲಿ ನೆರವಾದರು. 1926ರಿಂದ ಫಾರ್ವರ್ಡ್ ಲಿಬರ್ಟಿಯ ಭಾಗಿಯಾಗಿದ್ದು 1923ರಿಂದ ಅಮೃತಬಜಾರ್ ಪತ್ರಿಕೆಯಲ್ಲಿ ಸಂಪಾದಕೀಯ ಲೇಖನಗಳನ್ನು ಬರೆದರು. ಮುಂದೆ 1945ರಲ್ಲಿ ದೈನಿಕ ಬಸುಮತಿಯ ಸಂಪಾದಕತ್ವ ವಹಿಸಿಕೊಂಡು ಕೊನೆತನಕವೂ ಅದನ್ನು ಮುಂದುವರಿಸಿದರು. ಪತ್ರಿಕೋದ್ಯಮದೊಂದಿಗೆ ಅವರು ರಾಜಕೀಯ ಮತ್ತು ಸಾರ್ವಜನಿಕ ಚಟುವಟಿಕೆಗಳಲ್ಲೂ ಸಕ್ರಿಯ ಭಾಗವಹಿಸುತ್ತಿದ್ದರು. ಮೊದಲಿಗೆ ರಾಷ್ಟ್ರೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಅನಂತರ ಸ್ವರಾಜ್ಯ ಪಕ್ಷದ ಸದಸ್ಯರಾಗಿ ಹಾಗೂ ಕೊನೆಯಲ್ಲಿ ಹಿಂದೂ ಮಹಾಸಭೆಯ ಮುಂದಾಳುವಾಗಿ ಸಾರ್ವಜನಿಕ ಭಾಷಣಗಳನ್ನು ಮಾಡಿದರು. ರಾಷ್ಟ್ರದ ವಿಭಜನೆ ವಿರೋಧಿಸುತ್ತಿದ್ದ ಇವರಿಗೆ ಹಿಂದೂ ಮಹಾಸಭೆಯೊಂದಿಗೆ ಕೊನೆತನಕವೂ ಸಂಬಂಧವಿತ್ತು. 1949 ಡಿಸೆಂಬರಿನಲ್ಲಿ ಕಲ್ಕತ್ತೆಯಲ್ಲಿ ಸೇರಿದ್ದ ಹಿಂದೂ ಮಹಾಸಭೆಯ ಅಧಿವೇಶನದ ಅಧ್ಯಕ್ಷರಾಗಿದ್ದರು.

	ಉಪೇಂದ್ರನಾಥರು ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ನಿರ್ಬಿಸಿತರ್ ಆತ್ಮಕಥಾ. ಉನಪಂಚಾಸಿ, ಜಾತಿರ್ ಚಿರಂಬನ, ಧರ್ಮ ಓ ಕರ್ಮ, ಮತ್ತು ಭಗ್ ಭಗುರೇರ್ ಚಿತಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಯೌವನದಲ್ಲಿ ಕ್ರಾಂತಿಕಾರರಾಗಿದ್ದ ಇವರು ಕ್ರಮೇಣ ಮಹಾತ್ಮ ಗಾಂಧೀಜಿಯವರ ಅಹಿಂಸಾವಾದದಲ್ಲಿ ನಂಬಿಕೆ ತಾಳಿದರು. ಇವರಿಗೆ ಭಾರತಕ್ಕೆ ಹೊಂದಿಕೆಯಾಗುವ ಪಾಶ್ಚಾತ್ಯ ಶಿಕ್ಷಣಪದ್ಧತಿಯ ಕಡೆ ಒಲವಿತ್ತು. ಉಚಿತ ಪ್ರಾರಂಭಿಕ ಶಿಕ್ಷಣ ಪ್ರತಿಪಾದಿಸುತ್ತಿದ್ದ ಇವರು ಗಾಂಧೀಜಿಯವರ ನಯಾ ತಾಲೀಮ್ ಕಾರ್ಯಕ್ರಮಕ್ಕೆ ಬೆಂಬಲವಿತ್ತರು. ಭಾರತಕ್ಕೆ ಪೂರ್ಣ ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಬೇಕೆಂದರು. ಬ್ರಿಟೀಷರ ದುಬಾರಿ ಆಡಳಿತ ಪದ್ಧತಿಯನ್ನು ಖಂಡಿಸಿ ದೇಶದಲ್ಲಿ ಸರಿಯಾದ ಕೈಗಾರಿಕಾಕರಣ ತರಲು ಒತ್ತಾಯಿಸಿದರು. ಭಾರತ ಸ್ವಾವಲಂಬಿಯಾಗಬೇಕಿದ್ದರೆ ಸರಕಾರ ದೇಶೀಯ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದು ಅವಶ್ಯವೆಂದು ಸಾರಿದರು. ಜಾತೀಯತೆ ಮತ್ತು ಅಸ್ಪøಶ್ಯತೆಗಳನ್ನು ವಿರೋಧಿಸುತ್ತಿದ್ದರಲ್ಲದೆ ಸ್ತ್ರೀವಿಮೋಚನೆ ಮತ್ತು ಸ್ವಾತಂತ್ರ್ಯಗಳನ್ನು ಸಮರ್ಥಿಸುತ್ತಿದ್ದರೂ ಕೂಡ. ದೇಶದ ಸ್ವಾತಂತ್ರ್ಯಕ್ಕೆ ಹೋರಾಡುವುದೇ ರಾಷ್ಟ್ರೀಯತಾವಾದಿಯ ಧರ್ಮವೆಂದು ನಂಬಿದ್ದರು. ಅದೇ ರೀತಿ ನಡೆದು ಭಾರತೀಯರಿಗೆ ಮಾರ್ಗದರ್ಶನ ನೀಡಿದರು.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ